ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ ನಿರ್ಮಾಣವಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವೂ ನಡೆಯಲಿದ್ದು, ಜೊತೆಗೆ ರಕ್ತದಾನ ಶಿಬಿರ, ಟೀಮ್ ವೈಎಸ್‌ಕೆ ವೆಬ್‌ಸೈಟ್ ಚಾಲನೆ, ಯುವರತ್ನ ಸನ್ಮಾನ, ಸೇವಾಲಕ್ಷ್ಯ-ನೂರು ಲಕ್ಷ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜನೆ ಮಾಡಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಮಾಜ ಸೇವಾ ಸಂಘಟನೆಗಳಲ್ಲಿ ಒಂದಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಶಕ್ತಿ ಕಡೇಶಿವಾಲಯದ (Yuvashakti Kadeshivalaya) ವಾರ್ಷಿಕ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ.
ಇದೇ ಬರುವ ಫೆಬ್ರವರಿ 15ರ ಶನಿವಾರದಂದು ಯುವಶಕ್ತಿ ಕಡೇಶಿವಾಲಯ ಸಂಘಟನೆ ಜನ್ಮತಳೆದ ಹುಟ್ಟೂರು ಕಡೇಶಿವಾಲಯದ ಪೆರ್ಲಾಪು ಎಂಬಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ‘ಸಂತೃಪ್ತಿ’ ಹೆಸರಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳ ಜೊತೆಗೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭವೂ ನಡೆಯಲಿದೆ.


ಆ ದಿನ ಬೆಳಗ್ಗೆ ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ ನಿರ್ಮಾಣವಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವೂ ನಡೆಯಲಿದ್ದು, ಜೊತೆಗೆ ರಕ್ತದಾನ ಶಿಬಿರ, ಟೀಮ್ ವೈಎಸ್‌ಕೆ ವೆಬ್‌ಸೈಟ್ ಚಾಲನೆ, ಯುವರತ್ನ ಸನ್ಮಾನ, ಸೇವಾಲಕ್ಷ್ಯ-ನೂರು ಲಕ್ಷ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜನೆ ಮಾಡಲಾಗಿದೆ.

ರಾತ್ರಿ 8.30ಕ್ಕೆ ಸರಿಯಾಗಿ ಸಾಯಿಶಕ್ತಿ ಬಳಗ ಮಂಗಳೂರು ತಂಡದಿಂದ ಅದ್ಧೂರಿ ಶೈಲಿಯ ತುಳು ಜಾನಪದ ಸಿನಿನಾಟಕ ಜೋಡು ಜೀಟಿಗೆ ನಡೆಯಲಿದೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಸಂಸದ ಬ್ರಿಜೇಶ್ ಚೌಟ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಸೇವಕ ರವಿ ಕಟಪಾಡಿ ಅವರಿಗೆ ಯುವ ಸೇವಾರತ್ನ, ಪ್ರತಿಭಾನ್ವಿತ ಯುವ ನಿರ್ದೇಶಕ ಅನೀಶ್ ಅಮೀನ್ ವೇಣೂರುಗೆ ಯುವ ಕಲಾರತ್ನ, ಹಿರಿಯ ದೈವ ನರ್ತಕ ಲೋಕಯ್ಯ ಶೇರಾ ಅವರಿಗೆ ಯುವ ಧರ್ಮರತ್ನ ಮತ್ತು ಹಿರಿಯ ಕಬಡ್ಡಿ ಆಟಗಾರ ರೋಹಿತ್ ಮಾರ್ಲ ಅವರಿಗೆ ಯುವ ಕ್ರೀಡಾರತ್ನ ಬಿರುದು ನೀಡಿ ಸನ್ಮಾನಿಸಲಾಗುತ್ತದೆ.

ಯುವಶಕ್ತಿ ಕಡೇಶಿವಾಲಯ ಸಂಘಟನೆ ತನ್ನ ವಿವಿಧ ಶಾಖೆಗಳ ಮೂಲಕ ಈವರೆಗೆ ಕೋಟ್ಯಂತರ ರೂಪಾಯಿ ಹಣವನ್ನು ಸಮಾಜ ಸೇವೆಗೆ ಅರ್ಪಿಸಿದ್ದು, ಆ ಪೈಕಿ ಸೇವಾ ಪಥದ ಮೂಲಕ ₹7572502 ಲಕ್ಷ, ಯುವಶಕ್ತಿ ಕಡೇಶಿವಾಲಯದ ಮೂಲಕ ₹3819500 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 13 ಲಕ್ಷದ 92 ಸಾವಿರದ 2 ರೂಪಾಯಿ ಮೊತ್ತವನ್ನು ಸಮಾಜ ಸೇವೆಗೆ ವಿನಿಯೋಗಿಸಲಾಗಿದೆ. ಇದರ ಜೊತೆಗೆ ಯುವಶಕ್ತಿ ರಕ್ತನಿಧಿಯ ಮೂಲಕ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ 14520 ಯೂನಿಟ್ ರಕ್ತವನ್ನು ಪೂರೈಸಲಾಗಿದೆ. ಅಷ್ಟು ಮಾತ್ರವಲ್ಲದೇ, ಯುವಶಕ್ತಿ ಉದ್ಯೋಗ ನಿಮಿತ್ತಂ ಮೂಲ ಸಾವಿರಾರು ಉದ್ಯೋಗಾಂಕ್ಷಿಗಳಿಗೆ ಆಶಾಕಿರಣವಾಗಿ ಯುವಶಕ್ತಿ ಕಡೇಶಿವಾಲಯ ಕೆಲಸ ಮಾಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಯುವಶಕ್ತಿ ಸಂತೃಪ್ತಿ
ಸಾರ್ಥಕ್ಯ ಭಾವ ತುಂಬಿದ ಯುವಶಕ್ತಿ ಸಂಘಟನೆಯ ‘ಸಂತೃಪ್ತಿ’ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಭರದಿಂದ ಸಾಗಿದ್ದು, ಕೊನೇ ಕ್ಷಣದ ತಯಾರಿಗಳು ನಡೆಯುತ್ತಿವೆ.


Leave A Comment